ರಾಮರಾಯ ಸುಬೋಧ : -
	1890-1970. ಕನ್ನಡದ ಪ್ರಸಿದ್ಧ ಪತ್ರಿಕೋದ್ಯಮಿ. ಪ್ರಕಾಶಕ ಹಾಗೂ ಸಾಹಿತಿ, ಕನ್ನಡದಲ್ಲಿ ದಾಸಸಾಹಿತ್ಯವನ್ನು ಸಂಪಾದಿಸಿಕೊಟ್ಟ ಅಗ್ರಗಣ್ಯರಲ್ಲೊಬ್ಬರು. 1890ರಲ್ಲಿ ಚಿಕ್ಕಮಗಳೂರಿನಲ್ಲಿ ಜನಿಸಿದರು. ಇವರ ತಂದೆ ಹನುಮಂತರಾಯರು, ತಾಯಿ ಭಾರತೀಬಾಯಿ, ಈ ದಂಪತಿಗಳಿಗೆ ಆರು ಮಂದಿ ಮಕ್ಕಳು-ಮೂರು ಹೆಣ್ಣು, ಮೂರು ಗಂಡು ಮಕ್ಕಳಲ್ಲಿ ಇವರೇ ಎರಡನೆಯವರು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯ ಪಾಲನೆ ಪೋಷಣೆಯಲ್ಲಿ ಬೆಳೆದರು. ಕಡುಬಡತನದಿಂದಾಗಿ ತಂದೆಯವರು ತರೀಕೆರೆಯಲ್ಲಿದ್ದ ಜಮೀನು, ಮನೆ ಎಲ್ಲವನ್ನೂ ಮಾರಿ ಶಿವಮೊಗ್ಗಕ್ಕೆ ಬಂದರು. ಅಲ್ಲಿನ ಒಂದು ಹಳ್ಳಿಯಲ್ಲಿ ಪಟೇಲಿಕೆ ಕೆಲಸಕ್ಕೆ ಸೇರಿದರು. ವೃತ್ತಿಯಲ್ಲಿ ಮೋಸವಾಗಿ ಹಣ ಕಳೆದುಕೊಂಡರು. ಸರಕಾರಕ್ಕೆ ಹಣ ಭರಿಸಲಾದರೆ ಹನುಮಂತರಾಯರು ದೇಶಾಂತರ ಹೊರಟುಹೋದರು. ರಾಮರಾಯರ ಅಣ್ಣ ತನ್ನ ತಮ್ಮಂದಿರೊಡನೆ 1904ರಲ್ಲಿ ಹೊನ್ನಾಳಿಗೆ ಬಂದು ನೆಲೆಸಿದರು. ಹೀಗಾಗಿ ರಾಮರಾಯರಿಗೆ ಸರಿಯಾದ ವಿದ್ಯಾಭ್ಯಾಸ ದೊರೆಯಲಿಲ್ಲ. ಆದರೂ ಎಲ್ಲ ತೊಂದರೆಗಳನ್ನು ಎದುರಿಸಿ 1909 ರಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು.
 	
ಅಣ್ಣನ ಒತ್ತಾಯದ ಮೇರೆಗೆ ಮುಂದಿನ ವಿದ್ಯಾಭ್ಯಾಸ ತೊರೆದು ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡರು. ಕೆಲಸದ ಜೊತೆಗೆ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡರು. 1912 ರಲ್ಲಿ ನಂದಳಿಕೆ ಲಕ್ಷ್ಮೀನಾರಾಯಣಯ್ಯ (ಮುದ್ದಣ) ಬರೆದ ಶ್ರೀರಾಮಪಟ್ಟಾಭಿಷೇಕಂ ಎಂಬ ಪುಸ್ತಕವನ್ನು ಓದಿದರು. ಈ ಕೃತಿಯನ್ನು ಇವರು ವಚನ ರೂಪದಲ್ಲಿ ಬರೆದರು. ಇದನ್ನು ಸಾಹಿತ್ಯಾಸಕ್ತರ ಎದಿರು ಓದುವ ಭಾಗ್ಯ ದೊರೆಯಿತು. ಇಂಥದೊಂದು ಸಂದರ್ಭದಲ್ಲಿ ಕರ್ಪೂರ ಶ್ರೀನಿವಾಸರಾಯರ ದೃಷ್ಟಿಗೆ ಬಿದ್ದು ಅವರ ಪ್ರೋತ್ಸಾಹದಿಂದಾಗಿ ತಮ್ಮನ್ನು ಸಂಪೂರ್ಣವಾಗಿ ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ದೊರೆಯಿತು. ಅನಂತರದ ಕುಮಾರವ್ಯಾಸ ಭಾರತವನ್ನು ಗದ್ಯಪದ್ಯರೂಪಕ್ಕೆ ಪರಿವರ್ತಿಸಿದರು. ಈ ನಡುವೆ ಗುಮಾಸ್ತ ಹುದ್ದೆಗೆ ರಾಜೀನಾಮೆ ನೀಡಿ ಒಂದು ದಿನಸಿ ಅಂಗಡಿಯನ್ನು ಪ್ರಾರಂಭಿಸಿದರು. ವ್ಯಾಪಾರದಲ್ಲಿ ಕೈಸುಟ್ಟುಕೊಂಡಮೇಲೆ ಅದನ್ನೂ ನಿಲ್ಲಿಸಿದರು. ಅನಂತರ ಬೆಂಗಳೂರಿಗೆ ಬಂದು ಅಕ್ಕನ ಮನೆಯಲ್ಲಿ ನೆಲೆಸಿದರು. ಒಂದು ಶಿಶುವಿಹಾರದಲ್ಲಿ ಹತ್ತು ರೂಪಾಯಿ ಸಂಬಳದ ಮೇಲೆ ಉದ್ಯೋಗ ಹಿಡಿದರು. ಆದರೆ ಇವರ ಮನಸ್ಸಿನಲ್ಲಿ ಸ್ವತಂತ್ರ ಜೀವನದ ಹಂಬಲ ಅದಮ್ಯವಾಗಿತ್ತು. ಬಿಡುವಿನ ವೇಳೆಯಲ್ಲಿ ಬೆರಳಚ್ಚು, ಹೊಲಿಗೆ ಕಲಿತರು ; ಸಾಹಿತ್ಯ ರಚನೆಗೆ ತೊಡಗಿ ಹಲವು ದೇವರ ನಾಮಗಳನ್ನು ರಚಿಸಿದರು. ಅಧ್ಯಾಪನ ವೃತ್ತಿಯಲ್ಲಿದ್ದ ಕೆಲವು ಸವಲತ್ತುಗಳು ಇವರಿಗೆ ಓದಲು ಬರೆಯಲು ಅನುಕೂಲವಾದವು. ಇವರು ಮಕ್ಕಳಿಗೆ ಪಾಠ ಹೇಳುವ ಕ್ರಮವನ್ನು ಗಮನಿಸಿದ ಶಾಲಾ ತನಿಖಾಧಿಕಾರಿ ಶ್ರೀನಿವಾಸ ಅಯ್ಯಂಗಾರರು ಆಗತಾನೇ ಹೊಸದಾಗಿ ಪ್ರಾರಂಭಗೊಂಡ ಮುನಿಸಿಪಲ್ ಶಾಲೆಯಲ್ಲಿ ಇವರಿಗೆ ಉದ್ಯೋಗ ದೊರಕಿಸಿಕೊಟ್ಟರು. ರಾಮರಾಯರು ವಿದ್ಯಾರ್ಥಿಗಳ ಮೆಚ್ಚಿನ ಅಧ್ಯಾಪಕರಾದರು. ಮಕ್ಕಳಿಗಾಗಿ ಹಲವು ಪುಸ್ತಕಗಳನ್ನು ಹೊರತರುವ ಯೋಜನೆಯೊಂದನ್ನು ಹಮ್ಮಿಕೊಂಡರು. 1915ರಲ್ಲಿ ಆರ್. ವೆಂಕಟರಾಮಯ್ಯ ಎಂಬವರ ಜೊತೆಗೂಡಿ ಮುದ್ರಣಕಾರ್ಯಕ್ಕೆ ಕೈಹಾಕಿದರು. ಚಂದ್ರಹಾಸನಕಥೆ ಇವರ ಮೊದಲ ಪ್ರಕಟಣೆ. ಅನಂತರದ ಧ್ರುವ, ಪ್ರಹ್ಲಾದ, ಸಾವಿತ್ರಿ ಮುಂತಾದ ಪುರಾಣ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಬರೆದು ಪ್ರಕಟಿಸಿದರು.

 	ಮಿತ್ರರೆಲ್ಲ ಒಂದೆಡೆ ಸೇರಲು ಅನುಕೂಲವಾಗುವಂತೆ ಹಾಗೂ ಕನ್ನಡದ ಕೆಲಸಗಳನ್ನು ಮಾಡಲು `ಹಿತಕಾರಿಣೀ ಸಂಘ ಎಂಬ ಹೆಸರಿನ ಒಂದು ಸಂಘವನ್ನು ಪ್ರಾರಂಭಿಸಿದರು. ಈ ಸಂಘದ ಚಟುವಟಿಕೆಯ ಅಂಗವಾಗಿ ರಾತ್ರಿಶಾಲೆಯೊಂದನ್ನು ಪ್ರಾರಂಭಿಸಿದರು. ಈ ಶಾಲೆಯಲ್ಲಿ ಕನ್ನಡ, ತೆಲಗು, ತಮಿಳು, ಹಿಂದೀ ಮತ್ತು ಇಂಗ್ಲಿಷ್- ಈ ಐದು ಭಾಷೆಗಳನ್ನು ಕಲಿಸುತ್ತಿದ್ದರು. ಈ ಶಾಲೆ ಅನಂತರ ಸರ್ಕಾರದಿಂದ ಮಾನ್ಯತೆ ಪಡೆಯಿತು. ರಾಮರಾಯರು ಕೆಲವು ವರ್ಷಗಳಕಾಲ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಅನಂತರದ ಆರ್.ಬಿ.ಎ.ಎನ್.ಎಂ. ಶಾಲೆಯಲ್ಲಿ ಅಧ್ಯಾಪಕರಾದರು. 1918ರಲ್ಲಿ ಶಕುಂತಳಮ್ಮ ಎಂಬಾಕೆಯನ್ನು ವಿವಾಹವಾದರು.

 	1921ರಲ್ಲಿ ಪ್ರಸಿದ್ಧ ಮಹಾಪುರುಷರ ಚರಿತ್ರೆಗಳನ್ನು ಗದ್ಯರೂಪದಲ್ಲಿ ಸಂಕ್ಷೇಪವಾಗಿ ಬರೆದು ಪ್ರಕಟಿಸುವ ಹೊಸ ಯೋಜನೆಯನ್ನು ಹಮ್ಮಿಕೊಂಡರು. ಪೌರಾಣಿಕ ಐತಿಹಾಸಿಕ ಆಧುನಿಕ ಎಂದು ಮೂರು ವಿಭಾಗಮಾಡಿಕೊಂಡು ತಿಂಗಳಿಗೊಂದು ಪುಸ್ತಕದಂತೆ ವರ್ಷಕ್ಕೆ ಹನ್ನೆರಡು ಪುಸ್ತಕಗಳನ್ನು ಹೊರತರುವ ಯೋಜನೆ ರೂಪಿಸಿದರು. ಸುಬೋಧ ಮುದ್ರಣ ಮತ್ತು ಪ್ರಕಟಣಾಲಯ ಯಶಸ್ವಿಯಾಗಿ ಮುಂದುವರಿದು 1933ರವರೆಗೆ ನಡೆದುಕೊಂಡು ಬಂತು. ಈ ಯೋಜನೆಯಡಿಯಲ್ಲಿ ಒಟ್ಟು 140 ಪುಸ್ತಕಗಳನ್ನು ರಾಮರಾಯರು ಪ್ರಕಟಿಸಿದರು. ಇದು ಇವರ ಜೀವಿತದ ಬಹುದೊಡ್ಡ ಸಾಧನೆ. ಸುಬೋಧ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿಕೊಂಡು ಬಂದರು. ಇದರಿಂದಾಗಿ ಇವರ ಹೆಸರು ಸುಬೋಧ ರಾಮರಾಯರೆಂದೇ ಪ್ರಸಿದ್ಧವಾಯಿತು.
 ಹರಿದಾಸ ಕೀರ್ತನ ತರಂಗಿಣಿ ಎಂಬ ಮಾಲೆಯಲ್ಲಿ ರಾಮರಾಯರು ಸುಪ್ರಸಿದ್ಧ ಹರಿದಾಸರ ಕೃತಿಗಳನ್ನು ಆ ಕಾಲಕ್ಕೆ ದೊರೆತಷ್ಟನ್ನು ಸಂಪಾದಿಸಿ ಪ್ರಕಟಿಸಿದರು. ಈ ಮಾಲೆಯಲ್ಲಿ ಶ್ರೀಪಾದರಾಜ, ವ್ಯಾಸರಾಯ, ವಾದಿರಾಜ, ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸ, ಮೋಹನದಾಸ ಇವರ ಕೀರ್ತನೆಗಳು ಪ್ರಕಟವಾಗಿವೆ. ಇವುಗಳಲ್ಲದೆ ಶ್ರೀರಾಮಾಯಣ ಕಥಾಸಾರ, ಶ್ರೀಮದ್ಭಾಗವತ ಕಥಾಸಾರ, ಶ್ರಿಮನ್ಮಹಾಭಾರತ ಕಥಾಸಾರ ಎಂಬ ಬೃಹತ್ ಗ್ರಂಥಗಳನ್ನು ಇವರು ಹೊರತಂದಿದ್ದಾರೆ.

 	ಇವರು ಕೆಲವು ಕೃತಿಗಳನ್ನು ಇಂಗ್ಲಿಷ್‍ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಲನ್ ಕೆಲ್ಲರ್ ಮತ್ತು ಹೆನ್ರಿ ಫೋರ್ಡ್ ಇವು ಮುಖ್ಯವಾದವು. ರಾಜಾಸ್ಥಾನದ ಕಥಾವಳಿ ಎಂಬ ಪುಸ್ತಕವನ್ನು ಎರಡು ಭಾಗಗಳಲ್ಲಿ ತೆಲಗು ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಮಧ್ವಸಿದ್ಧಾಂತ ಬಾಲಬೋಧೆ ಭಾಗ-1 ಎಂಬ ಪುಸ್ತಕವನ್ನು ಇವರು ರಚಿಸಿದ್ದಾರೆ.

 	ರಾಮರಾಯರ ಸೇವೆ ಬಹುಮುಖವಾದದ್ದು. ಶಿಕ್ಷಣರಂಗ, ಆಧ್ಯಾತ್ಮಿಕ, ಹರಿದಾಸ ಸಾಹಿತ್ಯ, ಪತ್ರಿಕೋದ್ಯಮ, ಸಮಾಜಸೇವೆ ಹೀಗೆ ತಮ್ಮನ್ನು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಬೆಂಗಳೂರಿನ ಮುನಿಸಿಪಲ್ ಕೌನ್ಸಿಲ್‍ನ ಸದಸ್ಯರಾಗಿದ್ದರು (1948-51). ಬಡತನದಿಂದಾಗಿ ಓದಲು ಕಷ್ಟಪಡುತ್ತಿದ್ದ ಬುದ್ದಿವಂತ ಮಕ್ಕಳನ್ನು ಪ್ರೋತ್ಸಾಹಿಸಲು ಇವರು ಮಾಧ್ವಯುವಕ ಸಂಘದ ವತಿಯಿಂದ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದರು. ಇವರ ನಿಷ್ಠೆ ಮತ್ತು ಪ್ರಾಮಾಣಿಕ ಸೇವೆಯಿಂದಾಗಿ ಈ ವಿದ್ಯಾರ್ಥಿನಿಲಯ ದೊಡ್ಡದಾಗಿ ಬೆಳೆದು ಹಲವು ವಿದ್ಯಾರ್ಥಿಗಳಿಗೆ ಸಹಾಯಕವಾಯಿತು. ಸುಬೋಧ ಕುಸುಮಾಂಜಲಿ ಗ್ರಂಥ ಮಾಲೆಯ ಮೂಲಕ ಕನ್ನಡನಾಡಿನ ಬಾಲಕ, ಬಾಲಕಿಯರಿಗೆ ಭಾರತ ದೇಶದ ಪೌರಾಣಿಕ, ಐತಿಹಾಸಿಕ ಮತ್ತು ಆಧುನಿಕ ಕಾಲದ ವ್ಯಕ್ತಿಗಳನ್ನು ಪರಿಚಯ ಮಾಡಿಸಿ ಆ ಮೂಲಕ ಮಕ್ಕಳಲ್ಲಿ ನಿಷ್ಠೆ, ಕಾರ್ಯಶ್ರದ್ಧೆ, ಸತ್ಯ, ನ್ಯಾಯಪ್ರಿಯತೆ, ದೇಶಭಕ್ತಿ ಮೊದಲಾದ ಸನ್ನಡತೆಗಳು ಮೂಡಲು ಸಹಾಯಕರಾದರು. 1966ರಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಳಿ ಇವರ ಸೇವೆಯನ್ನು ಗುರುತಿಸಿ ಸಮಾಜ ಭೂಷಣ ಎಂಬ ಬಿರುದು ನೀಡಿ ಗೌರವಿಸಿತು. ಇದೇ ವರ್ಷ ಬೆಂಗಳೂರಿನ ನಟನ ಕಲಾ ಸಂಘ ಮಹಾಸಾಹಿತಿ ಪೂಜೆ ಎಂಬ ಹೆಸರಿನಿಂದ ಇವರನ್ನು ಗೌರವಿಸಿತು. ರಾಮರಾಯರು ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ 1970 ಮಾರ್ಚ್ 19 ರಂದು ಬೆಂಗಳೂರಿನಲ್ಲಿ ನಿಧನರಾದರು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ